ಕರ್ನಾಟಕ ಸಂಗೀತದಲ್ಲಿ ಎರಡು ಬಗೆಯ ಮೇಳಕರ್ತ ಪದ್ಧತಿಗಳು ರೂಢಿಯಲ್ಲಿವೆ. ಈಗ ಹೆಚ್ಚಿಗೆ ಪ್ರಚಾರದಲ್ಲಿರುವುದು ಸಂಪೂರ್ಣಮೇಳಗಳ ಪದ್ಧತಿ. ಈ ಪದ್ಧತಿಯಲ್ಲಿ, ಎಲ್ಲ ಮೇಳಕರ್ತ ರಾಗಗಳೂ ಕ್ರಮ ಸಂಪೂರ್ಣ ಆರೋಹಣ-ಅವರೋಹಣ ಸಂಚಾರಗಳನ್ನು (ಅಂದರೆ ಸರಿಗಮಪದನಿಸ- ಸನಿದಪಮಗರಿಸ) ಹೊಂದಿರುತ್ತವೆ, ಈ ಕೆಳಗಿನ ಪಟಿಯಲ್ಲಿ ಈ ಪದ್ಧತಿಗೆ ಸೇರಿದ ಮೇಳಕರ್ತರಾಗಗಳನ್ನು ಸೂಚಿಸಲಾಗಿದೆ, ಇವುಗಳನ್ನು ಸಂಸ್ಕೃತದ “ಕಟಪಯಾದಿ” ನಿಯಮಕ್ಕೆ ಅನುಗುಣವಾಗಿ ಹೆಸರಿಸಲಾಗಿದೆ. ರಾಗದ ಹೆಸರಿನ ಮೊದಲೆರಡು ಅಕ್ಷರಗಳು ಆ ರಾಗದ ಮೇಳ ಸಂಖ್ಯೆಯನ್ಮು ಸೂಚಿಸುತ್ತದೆ. ಕಟಪಯಾದಿ ನಿಯಮದ ಸಂಖ್ಯಾನಾ ವಾಮತೋಗತಿಃ (ಎಂದರೆ ಬಲದಿಂದ ಎಡಕ್ಕೆ ) ಸೂತ್ರಕ್ಕೆ ಅನುಗುಣವಾಗಿ ಈ ಹೆಸರುಗಳಿವೆ. ಕಟಪಯಾದಿ ಎಂದರೆ “ಕಾದಿ ನವ, ಟಾದಿ ನವ, ಪಾದಿ ಪಂಚ, ಯಾದ್ಯಷ್ಟ” ( ವ್ಯಂಜನಗಳಾದ ಕ ದಿಂದ ಝ ದ ವರೆಗಿನ ಒಂಭತ್ತು ವ್ಯಂಜನಗಳು ಕ್ರಮವಾಗಿ ೧ ರಿಂದ ೯, ನಂತರದ ಟ ದಿಂದ ಧ ವರೆಗಿನ ವ್ಯಂಜನಗಳಿಗೂ ಹೀಗೆಯೇ ೧ ರಿಂದ ೯, ಪ ದಿಂದ ಮ ವರೆವಿಗೆ ೧ ರಿಂದ ೫ ಹಾಗು ಯ ದಿಂದ ಹ ವರೆಗಿನ ವ್ಯಂಜನಗಳಿಗೆ ೧ ರಿಂದ ೮; ಹೀಗೆ ಸಂಖ್ಯೆಗಳಿವೆ. ಕನಕಾಂಗಿ ಎಂಬ ಮೇಳಕರ್ತ ರಾಗದ ಮೊದಲೆರಡು ಅಕ್ಷರಗಳಾದ ಕ ಮತ್ತು ನ ಗಳು ಕ್ರಮವಾಗಿ ೧ ಹಾಗು ೦ ಯನ್ನು ಸೂಚಿಸುತ್ತವೆ. ಇವನ್ನು ಬಲದಿಂದ ಎಡಕ್ಕೆ (ಸಂಖ್ಯಾನಾ ಸೂತ್ರದಂತೆ) ಓದುವಾಗ ೦೧ ಎಂದಾಗುತ್ತದೆ, ಎಂದರೆ ಒಂದನೇ ಮೇಳಕರ್ತ ರಾಗ ಎಂಬುದು ಅರಿವಾಗುತ್ತದೆ. ಎಲ್ಲಾ ಎಪ್ಪತ್ತೆರಡು ಮೇಳಕರ್ತ ರಾಗಗಳಿಗೂ ಇದೇ ಸೂತ್ರಕ್ಕನುಗುಣವಾಗಿ ಹೆಸರನ್ನಿಡಲಾಗಿದೆ. ಮೇಳಕರ್ತ ರಾಗದ ಮೊದಲೆರಡು ಅಕ್ಷರಗಳ ಸಂಖ್ಯೆಯನ್ನು ಕಟಪಯಾದಿ ನಿಯಮದಲ್ಲಿ ಕಂಡುಕೊಂಡು ಬಲದಿಂದ ಎಡಕ್ಕೆ ಓದಿಕೊಂಡಲ್ಲಿ (ಸಂಖ್ಯೆಯನ್ನು) ಅದು ಎಷ್ಟನೇಯ ಮೇಳಕರ್ತವೆಂಬುದನ್ನು ಅರಿತುಕೊಳ್ಳಬಹುದಾಗಿದೆ. ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಮುತ್ತುಸ್ವಾಮಿ ದೀಕ್ಷಿತರು ಅಸಂಪೂರ್ಣ ಮೇಳ ಪದ್ಧತಿಯನ್ನು ಅನುಸರಿಸಿ ಕೃತಿರಚನೆ ಮಾಡಿದ್ದಾರೆ. ಅದರಲ್ಲಿಯ ಮೇಳ ರಾಗಗಳ ಲಕ್ಷಣವೂ, ಹೆಸರುಗಳೂ ಬೇರೆಯಾಗಿವೆ.